ಎಬೋಲಾ ಎಂಬ ಸಾಂಕ್ರಾಮಿಕ ರೋಗ

ಏಡ್ಸ್, ಅಂಥ್ರಾಕ್ಸ್, ಎಚ್1 ಎನ್1….   ಈ ಎಲ್ಲ ಮಾರಕ  ರೋಗಗಳ ಜೊತೆಗೆ ವಿಶ್ವದ ಹಲವು ರಾಷ್ಟ್ರಗಳ ಜನರು ನಿದ್ದೆಗೆಡಿಸಿದ ಇನ್ನೊಂದು ಸಾಂಕ್ರಾಮಿಕ ರೋಗ ಎಂದರೆ ಎಬೋಲಾ ವೈರಸ್ ರೋಗ(Ebola virus disease). ವಿಶ್ವ ಆರೋಗ್ಯ ಸಂಸ್ಥೆ  ಬಿಡುಗಡೆ ಮಾಡಿದ ವರದಿ ಪ್ರಕಾರ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಸಾವಿರಾರು ಜನರು ಎಬೋಲಾ ರೋಗಕ್ಕೆ ಬಲಿಯಾಗಿದ್ದರು. ಆಪ್ರಿಕಾ ಖಂಡದ ರಾಷ್ಟ್ರಗಳಷ್ಟೇ ಅಲ್ಲದೆ ಪ್ರಪಂಚದ ಇತರ ರಾಷ್ಟ್ರಗಳೂ ಎಬೋಲಾ ಹೆಸರು ಕೇಳಿದರೇನೆ ಬೆಚ್ಚಿ ಬೀಳುವಂತಹ ಭಯಾನಕ ಪರಿಸ್ಥಿತಿ ಎದುರಾಗಿತ್ತು. ಇಂತಹ ರೋಗದ ಕುರಿತು ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.  

ಏನಿದು ಎಬೋಲಾ?: ಇದೊಂದು ವೈರೆಸ್ ಬಾಧಿತ ಕಾಯಿಲೆ. ಈ ಹಿಂದೆ ಇದನ್ನು ಎಬೋಲಾ ಹ್ಯಮೋರಾಜಿಕ್(Ebola Hemorrhagic Fever) ಜ್ವರ ಎಂದು ಕರೆಯಲಾಗಿತ್ತು. 1976ರಲ್ಲೇ ಈ ರೋಗ ಸೂಡಾನ್ ಮತ್ತು ಅಂದಿನ ಜೈರೆ ದೇಶದಲ್ಲಿ ಕಂಡುಬಂದಿತ್ತು. ಆ ಜೈರೆ ದೇಶ ಇಂದು ಮರುನಾಮಕರಣಗೊಂಡು ಕಾಂಗೋ ಗಣರಾಜ್ಯವೆಂದು ಕರೆಸಿಕೊಳ್ಳುತ್ತಿದೆ.  ಕಾಂಗೋದಲ್ಲಿನ ಎಬೋಲಾ ನದಿ ದಂಡೆಯ ಮೇಲಿನ ಹಳ್ಳಿಗಳಲ್ಲಿ ಮೊದಲು ಕಾಣಿಸಿಕೊಂಡಿದ್ದರಿಂದ ಇದಕ್ಕೆ ಎಬೋಲಾ ಎಂದು ಹೆಸರಿಸಲಾಗಿದೆ. ಪಶ್ಚಿಮ ಹಾಗೂ ಕೇಂದ್ರ ಆಫ್ರಿಕಾದಲ್ಲಿ  ಮೊದಲು ಈ ರೋಗ ಕಾಣಿಸಿಕೊಂಡಾಗ ರೋಗ ತಗುಲಿದ  ಶೇ.90ರಷ್ಟು ಜನ ಸಾವನ್ನಪ್ಪಿದ್ದರು.

 ಈ ಎಬೋಲಾ ವೈರಸ್ ನಲ್ಲಿ ಮುಖ್ಯವಾಗಿ ಆರು ವಿಧಗಳಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ಅವುಗಳಲ್ಲಿ ನಾಲ್ಕು ವಿದಧ ವೈರಸ್ ಗಳು ಮನುಷ್ಯರಲ್ಲಿ ಸಂಕ್ರಮಿಸುವ ವೈರಸ್ ಗಳಾಗಿವೆ. ಅವುಗಳೆಂದರೆ: ಜೈರೆ ವೈರಸ್, ಸುಡಾನ್ ವೈರಸ್, ಬುಂಡಿಬುಗ್ಯೊ ವೈರಸ್,  ಮತ್ತು ಥೈ ಪಾರೆಸ್ಟ್ ವೈರಸ್ಗಳು. ಇನ್ನುಳಿದ ಎರಡು ವೈರಸ್ ಗಳು ಪ್ರಾಣಿಗಳಲ್ಲಿ ಮಾತ್ರ ಸಂಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳಿಂದ ಮನುಷ್ಯರಿಗೆ ಯಾವುದೇ ಸಮಸ್ಯೆಗಳಿರುವುದಿಲ್ಲ. ಅವುಗಳೆಂದರೆ, ರೆಸ್ಟೋನ್ ವೈರಸ್ ಮತ್ತು ಬೊಂಬಾಲಿ ವೈರಸ್ ಗಳು.

1976 ರಲ್ಲಿ ಎಬೋಲಾ ವೈರಸ್ ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 35 ರಿಂದ 40 ಕ್ಕೂ ಹೆಚ್ಚು ಬಾರಿ ಸಂಕ್ರಮಿಸಿದ್ದು ದಾಖಲಾಗಿದೆ. ಆಗೊಮ್ಮೆ-ಈಗೊಮ್ಮೆ ಅಮೇರಿಕಾ,ಯುರೋಪ್, ಏಷ್ಯಾ ಖಂಡದ ದೇಶಗಳಲ್ಲಿ ಎಬೋಲಾ ವೈರಸ್ ರೋಗ ಕಾಣಿಸಿಕೊಂಡಿದ್ದರೂ, ಶಾಶ್ವತವಾಗಿ ನೆಲೆಯೂರಿದ್ದು, ಭಯಂಕರ – ಭೀಬತ್ಸ ದಾಳಿ ಮಾಡಿದ್ದು ಮಾತ್ರ ಕೇಂದ್ರ ಮತ್ತು ಪಶ್ಚಿಮ ಆಪ್ರಿಕಾ ಖಂಡದ ದೇಶಗಳಲ್ಲಿ ಮಾತ್ರ. ಅದರಲ್ಲೂ ಈ ಎಬೋಲಾ ವೈರಸ್ ನಿಂದ ಅತೀ ಹೆಚ್ಚು ಜೀವ ಹಾನಿಗೊಳಗಾದ ದೇಶಗಳೆಂದರೆ, ಕಾಂಗೋ ಗಣರಾಜ್ಯ, ಉಗಾಂಡಾ, ಸಿಯೆರಾ ಲಿಯೋನಾ, ಲೈಬೇರಿಯಾ ಮತ್ತು ಗಿಣಿ ದೇಶಗಳು.  ಎಬೋಲಾ ವೈರಸ್ ರೋಗ ಸಂಕ್ರಮಣಗಳಲ್ಲಿ ಕೆಲವು ಆತಂಕಕಾರಿಯಾದ ಸಂಕ್ರಮಣಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಎರಡನೇ ದೊಡ್ಡ ಸಂಕ್ರಮಣ, 2014 ರಿಂದ 2016 ರವರೆಗೆ ಗಿಣಿ, ಲೈಬೆರಿಯಾ, ಸೈರಾಲೊನ ದೇಶಗಳಲ್ಲಿ ಹರಡಿತ್ತು. ಈ ಸಂದರ್ಭದಲ್ಲಿ 28600 ಎಬೋಲಾ ಸೊಂಕಿತರು  ಪತ್ತೆಯಾಗಿದ್ದರು, ಅವರಲ್ಲಿ 11325 ಜನರು ಎಬೋಲಾ ರೋಗಕ್ಕೆ ಬಲಿಯಾಗಿದ್ದರು. ಇದನ್ನ ಪಶ್ಚಿಮ ಆಪ್ರಿಕಾ ಸಂಕ್ರಮಣ (West Africa Epidemic) ಎಂದು ದಾಖಲಿಸಲಾಗಿದೆ.

ಮೂರನೇ ದೊಡ್ಡ ಸಂಕ್ರಮಣ, 2018 ರಿಂದ  2020 ರವರೆಗೂ ಹರಡಿತ್ತು. ಇದು ಕಾಂಗೋ ಗಣರಾಜ್ಯ ಕೇಂದ್ರಿತವಾಗಿ ಪ್ರಪಂಚದ ಹಲವು ರಾಷ್ಟ್ರಗಳಿಗೂ ಹರಡಿ ಭಯ-ಭೀತಗೋಳಿಸಿತ್ತು. ಈ ಸಂಕ್ರಮಣದಲ್ಲಿ 3481 ರೋಗ ಪ್ರಕರಣಗಳು ದಾಖಲಾಗಿದ್ದವು, ಅದರಲ್ಲಿ 2299 ಸಾವುಗಳು ಸಂಭವಿಸಿದ್ದವು.

2022ರಲ್ಲಿ   ಉಗಾಂಡಾದಲ್ಲಿ ಏಕಾಏಕಿ ಸಂಕ್ರಮಿಸಿತು. ಇದನ್ನು 2023 ರ ಆರಂಭದಲ್ಲಿ ಯಶಸ್ವಿಯಾಗಿ ನಿಯಂತ್ರಿಸಲಾಗಿದೆ ಎಂದು ಘೋಷಿಸಲಾಯಿತು. ಈ ಸಂಕ್ರಮಣದಲ್ಲಿ 165 ರೋಗ ಪ್ರಕರಣಗಳು ದಾಖಲಾಗಿದ್ದವು ಮತ್ತು 78 ಸಾವು ಸಂಭವಿಸಿದ್ದವು.

2026 ರ ಮೇ ತಿಂಗಳಿನಲ್ಲಿ ಬುಂಡಿಬುಗ್ಯೊ ಎಬೋಲಾ ವೈರಸ್ ಸಂಕ್ರಮಣ, ಮದ್ಯ ಆಪ್ರಿಕಾದ ಕಾಂಗೋ ಗಣರಾಜ್ಯ ಮತ್ತು ಉಗಾಂಡಾ ದೇಶಗಳಲ್ಲಿ ಹರಡಿಕೊಂಡಿದೆ.  ಈ ಸಂಕ್ರಮಣವೂ ಬೇರೆ- ಬೇರೆ ದೇಶಗಳಿಗೆ ಹರಡುವ ಅಪಾಯವಿದೆ. ಇದೇ ಕಾರಣಕ್ಕಾಗಿ, ವಿಶ್ವ ಆರೋಗ್ಯ ಸಂಸ್ಥೆ, ಎಲ್ಲ ದೇಶಗಳಿಗೂ ಮುನ್ನೆಚರಿಕೆ ವಹಿಸಲು, ಕಟ್ಟು-ನಿಟ್ಟಿನ ನಿಗಾ ಇಡಲು ಸೂಚಿಸಿದೆ.

ರೋಗ ಪ್ರಸಾರ: ಆಪ್ರಿಕಾದ ದಟ್ಟ ಅರಣ್ಯಗಳಲ್ಲಿರುವ ಹಣ್ಣಿನ ಬಾವಲಿ(Fruit Bats)ಗಳಲ್ಲಿ ಎಬೋಲಾ ವೈರಸ್ ನೈಸರ್ಗಿಕವಾಗಿರುತ್ತದೆ. ಇದು ಕಾಡು ಪ್ರಾಣಿಗಳಾದ ಚಿಂಪಾಜಿಗಳು, ಗೊರಿಲ್ಲಾಗಳು, ಮಂಗಗಳು, ಮುಳ್ಳು ಹಂದಿಗಳಂತಹ ಪ್ರಾಣಿಗಳ ನಿಕಟ ಸಂಪರ್ಕದ  ಮೂಲಕ ಇಲ್ಲವೇ ಮಾಂಸಹಾರದ ಮೂಲಕ ಜನರನ್ನು ತಲುಪಿರಬಹುದು ಎಂದು ಊಹಿಸಲಾಗಿದೆ. ಎಬೋಲಾ ಪ್ರಾಣಿಗಳಿಂದ – ಮನುಷ್ಯನಿಗೆ, ಮನುಷ್ಯನಿಂದ- ಮನುಷ್ಯನಿಗೆ ಕೇವಲ ದೈಹಿಕ ಸಂಪರ್ಕದ ಮುಖಾಂತರ ಹರಡುವ ರೋಗವಾಗಿದೆ. ಎಬೋಲಾದಿಂದ ಅಸ್ವಸ್ಥರಾಗಿರುವ ಅಥವಾ ಮರಣ ಹೊಂದಿದ ವ್ಯಕ್ತಿಯ ರಕ್ತ, ಮಲ-ಮೂತ್ರ, ವಾಂತಿ, ಅವರು ಸ್ಪರ್ಷಿಸಿದ ವಸ್ತುಗಳು ಮುಂತಾದವುಗಳಿಂದಲೂ ರೋಗ ಹರಡುತ್ತದೆ.

ರೋಗ ಲಕ್ಷಣಗಳು:  ಎಬೋಲಾ ವೈರಸ್ ಸೋಂಕಿದ ನಂತರ 2-21 ದಿನಗಳೊಳಗೆ ರೋಗಲಕ್ಷಣಗಳು ಘೋಚರಿಸುತ್ತವೆ.ಆರಂಭದಲ್ಲಿ ಜ್ವರ, ಆಯಾಸ, ಸ್ನಾಯು ನೋವು, ತೆಲೆನೋವು, ಮೌಂಸಖಂಡಗಳಲ್ಲಿ  ನೋವು, ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ನಂತರ ವಾಂತಿ , ಬಾಯಾರಿಕೆ, ಅತಿಸಾರ ಹಾಗೂ ರಕ್ತಸ್ರಾವಗಳು ಆರಂಭವಾಗುತ್ತದೆ.

ಮುನ್ನೆಚರಿಕೆ ಕ್ರಮಗಳು: ಎಬೋಲಾ ಗುಣಪಡಿಸಲು ಆಯಾ ರೋಗ ಲಕ್ಷಣಗಳಿಗೆ ತಕ್ಷಣವೆ ಚಿಕಿತ್ಸೆ ಪಡೆಯುವುದು, ಪೌಷ್ಟಿಕ-ರೋಗ ನಿರೋಧಕ ಆಹಾರ ಸೇವನೆ ಮಾಡುವುದು ಮತ್ತು ರೋಗ ಪೀಡಿತರಲ್ಲಿ ಉಂಟಾಗುವು ನಿರ್ಜಲೀಕರಣ ತಡೆಯಲು ನಿರಂತರ ದ್ರವ ಪದಾರ್ಥ ಸ್ವೀಕರಿಸುವುದು ಮುನ್ನೆಚರಿಕೆ ಕ್ರಮಗಳಾಗಿವೆ.

ಡಾ. ಪಯಾಟ್ ಸಾಹಸಗಾಥೆ: ಪಶ್ಚಿಮ ಆಫ್ರಿಕಾದ ಜೈರೆ ದೇಶದಲ್ಲಿ ಮೊದಲು ಕಾಣಿಸಿಕೊಂಡ ಈ ಕಾಯಿಲೆಯ ಬಗ್ಗೆ ಜೀವದ ಹಂಗು ತೊರೆದು ಅಲ್ಲಿಗೇ ಹೋಗಿ ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ಮಾಡಿ ಅದಕ್ಕೆ ಈಗಿರುವ ಹೆಸರು ಕೊಟ್ಟ ಕೀರ್ತಿ ಬೆಲ್ಜಿಯಂ ಯುವ ವಿಜ್ಞಾನಿ  ಡಾ. ಪಯಾಟ್ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಡಾ. ಪೀಟರ್ ಪಯಾಟ್ ನಂತರ ಹಲವಾರು ವೈದ್ಯಕೀಯ ಸಂಶೋಧನೆ ನಡೆಸಿ ಪ್ರಸಿದ್ಧರಾದರು.

ಅನುಮೋದಿತ ಎಬೋಲಾ ಲಸಿಕೆಗಳು: ಪ್ರಸ್ತುತ ಜಾಗತಿಕವಾಗಿ ಬಳಸಲಾಗುವ ಎರಡು ಪ್ರಾಥಮಿಕ ಲಸಿಕೆ ವ್ಯವಸ್ಥೆಗಳಿವೆ. ಅವುಗಳೆಂದರೆ, ಮೆರ್ಕ್ ಎಂಬ ಕಂಪನಿಯಿಂದ ತಯಾರಾದ ERVEBO ಲಸಿಕೆ, ಹಾಗೂ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯಿಂದ ತಯಾರಿಸಲ್ಪಟ್ಟಿರುವ ZABDENO & MVABEA ಎಂಬ ಎರಡು ಲಸಿಕೆಗಳನ್ನು ತಯಾರಿಸಿದೆ. ಈ ಎರಡೂ ಕಂಪನಿಗಳ ಲಸಿಕೆಗಳು ಕೇವಲ ಜೈರೆ ಎಬೋಲಾ ವೈರಸ್ ರೋಗಕ್ಕೆ ಮಾತ್ರ ಪರಿಣಾಮಕಾರಿಯಾಗಿವೆ. ಉಳಿದ ಎಬೋಲಾ ವೈರಸ್ ತಳಿಗಳ ರೋಗಕ್ಕೆ ಇವುಗಳು ಕೆಲಸ ಮಾಡುವುದಿಲ್ಲ. ಅಲ್ಲದೇ,  ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿಯೂ ಕೂಡಾ ಎಬೋಲಾ ರೋಗಕ್ಕೆ ಔಷಧಗಳ ಸಂಶೋಧನೆಗೆ ಪ್ರಯತ್ನಗಳು ನಡೆದಿವೆ.

ಸ್ನೇಹಿತರೆ, ನಾವುಗಳು ಆಧುನಿಕತೆಯ ಭರದಲ್ಲಿ ಏನೆಲ್ಲ ಸಾಧಿಸಿರಬಹುದು, ಆದರೆ ಈ ಪ್ರಕೃತಿಯ ಮುಂದೆ ನಾವು ಎಷ್ಟು ಕನಿಷ್ಠ ಜೀವಿಗಳು ಎಂಬುದನ್ನು ನಮ್ಮ ಕಣ್ಣಿಗೆ ಕಾಣದ ಅಂರ್ಥಾಕ್ಸ್, ಎಚ್1 ಎನ್1, ಎಬೋಲಾ, ಕರೋನಾ ದಂತಹ ವೈರಸ್ ಜೀವಿಗಳು ಆಗಾಗ್ಗೆ ಮನುಕುಲದ ಮೇಲೆ ದಾಳಿ ಮಾಡುವ ಮೂಲಕ ತೋರಿಸಿಕೊಟ್ಟಿವೆ. ಇನ್ನಾದರೂ ಮನುಷ್ಯ ಪ್ರಕೃತಿಗೆ ತಲೆಬಾಗಿ, ಸಕಲ ಜೀವ ಜಂತುಗಳೊಂದಿಗೆ ಸಹಕಾರದಿಂದ ಬದುಕಬೇಕು. ಸಹಬಾಳ್ವೆ ನಡೆಸಬೇಕು. ಏನಂತಿರಾ.. ಇದಿಷ್ಟು ಎಬೋಲಾ ರೋಗದ ಕುರಿತಾದ ಸಂಕ್ಷಿಪ್ತ ಮಾಹಿತಿ.

ನಿಮ್ಮ ಅನಿಸಿಕೆ- ಅಭಿಪ್ರಾಯಗಳನ್ನ ಕಮೆಂಟ್ಗಳ ಮುಖಾಂತರ ತಿಳಿಸಿ. ದನ್ಯವಾದಗಳು. ಮತ್ತೆ ಬೇಟಿಯಾಗೋಣ.

Leave a Comment

Your email address will not be published. Required fields are marked *

error: Content is protected !!