ಸಮುದ್ರ ಮಟ್ಟ ಎಂದರೇನು?

ಸಮುದ್ರ ಮಟ್ಟವು ಭೂಮಿಯ ಮೇಲಿನ ಎತ್ತರ ಮತ್ತು ಆಳವನ್ನು ಅಳೆಯುವ ಮೂಲ ಮಟ್ಟವಾಗಿದೆ. ಇಲ್ಲಿ ಮಟ್ಟ ಎಂದರೆ, ಮೇಲ್ಮೈ ಎಂದರ್ಥ, ಸಮುದ್ರದ ಮೇಲ್ಮೈನ್ನು ಆಧಾರವಾಗಿಟ್ಟುಕೊಂಡು ಭೂಮಿಯ ಆಳ ಮತ್ತು ಎತ್ತರಗಳನ್ನು ಅಳೆಯುತ್ತಾರೆ.

ನಮಗೆಲ್ಲಾ ತಿಳಿದಿರುವಂತೆ ಅಳತೆ ಪಟ್ಟಿಯ ಮದ್ಯದ ಬಿಂದುವನ್ನು ಶೂನ್ಯವೆಂದು ಗುರುತಿಸುತ್ತೇವೆ. ಆ ಶೂನ್ಯದ ಬಲಭಾಗಕ್ಕೆ ಧನಾತ್ಮಕ ಸಂಖ್ಯಗಳು ಮತ್ತು ಆ ಶೂನ್ಯದ ಎಡಭಾಗಕ್ಕೆ ಋಣಾತ್ಮಕ ಸಂಖ್ಯಗಳು ನಮೂದಾಗಿರುತ್ತವೆ. ಭೂಮಿಯ ಎತ್ತರ ಮತ್ತು ಆಳವನ್ನು ಅಳೆಯಲು, ಸಮುದ್ರದ ಮೇಲ್ಮೈನ್ನು ಶೂನ್ಯ ಬಿಂದುವೆಂದು ಪರಿಗಣಿಸುತ್ತೇವೆ. ಸಮುದ್ರದ ಮೇಲ್ಮೈಯಿಂದ ಮೇಲಕ್ಕೆ ಇರುವುದನ್ನು ಧನಾತ್ಮಕವೆಂದು ಮತ್ತು ಸಮುದ್ರ ಮೇಲ್ಮೈಯಿಂದ ಕೆಳಕ್ಕೆ ಇರುವುದನ್ನು ಋಣಾತ್ಮಕವೆಂದು ಪರಿಗಣಿಸುತ್ತೇವೆ. ಹೀಗೆ ಸಮುದ್ರದ ಮೇಲ್ಮೈಯನ್ನು ಭೂಮಿಯ ಮೇಲಿನ ಎತ್ತರ ಮತ್ತು ಆಳವನ್ನು ಅಳೆಯಲು ಬಳಸಿಕೊಳ್ಳಲಾಗುತ್ತದೆ.

ಈ ಭೂಮಿಯ ಮೇಲೆ 5 ಮಹಾಸಾಗರಗಳಿವೆ. ಈ 5 ಮಹಾಸಾಗರಗಳು ಪರಸ್ಪರ ಅಂತರ ಸಂಪರ್ಕ ಹೊಂದಿದ್ದು, ಇವುಗಳು ಒಟ್ಟಾಗಿ ವಿಶ್ವ ಮಹಾ ಸಮುದ್ರ ಅಥವಾ ವಿಶ್ವ ಮಹಾ ಸಾಗರ  ಎನಿಸಿಕೊಳ್ಳುತ್ತವೆ.  ಈ ವಿಶ್ವ ಮಹಾ ಸಮುದ್ರ ಭೂಗೃಹದ ಶೇ 70 ರಷ್ಟು ಭಾಗವನ್ನು ಆವರಿಸಿದ್ದು, ಎಲ್ಲ ಭೂಖಂಡಗಳನ್ನು ಸುತ್ತುವರಿದಿದೆ. ಈ ವಿಶ್ವ ಮಹಾ ಸಮುದ್ರದ ನಿರಂತರ ಜಲ ಸಮೂಹದ ಮೇಲ್ಮೈನ್ನು ಸಮುದ್ರ ಮಟ್ಟ (sea level) ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಒಂದೇ ಮಟ್ಟವನ್ನು ಹೊಂದಿದೆ ಎಂದು ಪರಿಭಾವಿಸಲಾಗುತ್ತದೆ.

ಆದರೆ, ಭೂಮಿಯ ಮೇಲಿನ ಗಾಳಿ, ಪ್ರವಾಹಗಳು, ನದಿ ವಿಸರ್ಜನೆಗಳು, ಗುರತ್ವಕರ್ಷಣೆ ಮತ್ತು ತಾಪಮಾನದಲ್ಲಿನ ವ್ಯತ್ಯಾಸಗಳು ಸಮುದ್ರ ಮಟ್ಟವನ್ನು ಏರು ಪೇರು ಮಾಡುತ್ತವೆ. ಈ ವ್ಯತ್ಯಾಸಗಳನ್ನು ಹೋಗಲಾಡಿಸಲು ಸರಾಸರಿ ಸಮುದ್ರ ಮಟ್ಟ(mean sea level) ಎಂಬ ಪರಿಕಲ್ಪನೆ ಜಾರಿಗೆ ತರಲಾಯಿತು.

ಅಮೇರಿಕ ಮತ್ತು ಅದರ ವಿವಿಧ ಪ್ರಾಂತ್ಯಗಳಲ್ಲಿ ಪ್ರತಿ ಗಂಟೆಗೆ ಒಮ್ಮೆ ಸಮುದ್ರ ಮಟ್ಟದ ಅಳತೆಗಳನ್ನು ತೆಗೆದುಕೊಳ್ಳುತ್ತಾ, ನಿರಂತರ 19 ವರ್ಷಗಳವರೆಗೆ ಅದ್ಯಯನ ಮಾಡಲಾಯಿತು.  ಆ 19 ವರ್ಷಗಳ ಸಮುದ್ರ ಮಟ್ಟದ ಅಳತೆಗಳ ಸರಾಸರಿಯನ್ನು ಸರಾಸರಿ ಸಮುದ್ರ ಮಟ್ಟ (mean sea level) ಎಂದು ಕರೆಯಲಾಯಿತು.

19 ವರ್ಷಗಳ ಅವಧಿಯನ್ನು ಮೆಟಾನಿಕ್ ಚಕ್ರ ಎಂದು ಕರೆಯಲಾಗುತ್ತದೆ.  1 ಮೆಟೋನಿಕ್ ಚಕ್ರ, ಚಂದ್ರಣ 235 ತಿಂಗಳುಗಳಿಗೆ ಸಮ.

19 ಸೌರ ವರ್ಷಗಳು ≈ 6,939.6 ದಿನಗಳು

235 ಚಂದ್ರ (ಸಿನೋಡಿಕ್) ತಿಂಗಳುಗಳು ≈ 6,939.7 ದಿನಗಳು

ಇವು ಬಹುತೇಕ ಸಮಾನವಾಗಿರುವುದರಿಂದ, ಚಂದ್ರನ ಹಂತಗಳು (ಹುಣ್ಣಿಮೆ ಮತ್ತು ಅಮಾವಾಸ್ಯೆಯಂತಹವು) ಪ್ರತಿ 19 ವರ್ಷಗಳಿಗೊಮ್ಮೆ ಬಹುತೇಕ ಒಂದೇ ಕ್ಯಾಲೆಂಡರ್ ದಿನಾಂಕಗಳಲ್ಲಿ ಬರುತ್ತವೆ.ಉದಾಹರಣೆಗೆ: 20 ಫೆಬ್ರವರಿ 2026 ರಂದು ಹುಣ್ಣಿಮೆ ಇದ್ದರೆ, 19 ವರ್ಷಗಳ ನಂತರ(2045 ರಲ್ಲಿ), ಬಹುತೇಕ ಇದೇ ದಿನಾಂಕದಂದು ಹುಣ್ಣಿಮೆ ಇರುತ್ತದೆ. ಎಂದರ್ಥ.

1 ಮೆಟಾನಿಕ್ ಚಕ್ರದ ಅವಧಿ, ಚಂದ್ರನ ಕಕ್ಷೆಯಲ್ಲಿನ ದೀರ್ಘಕಾಲೀನ ವ್ಯತ್ಯಾಸಗಳು, ಪರಿಣಾಮಗಳು ಮತ್ತು ಭೂವಾತಾವರಣದಲ್ಲಾಗುವ ಹವಮಾನ ವೈಪರಿತ್ಯಗಳು, ಸಾಗರ-ಸಮುದ್ರಗಳ ಮೇಲ್ಮೈಯಲ್ಲಾಗುವ ಬದಲಾವಣೆಗಳನ್ನು ಅರಿಯಲು  ವಿಜ್ಞಾನಿಗಳಿಗೆ ಅನುವು ಮಾಡಿಕೊಡುತ್ತದೆ. ಸರಾಸರಿ ಸಮುದ್ರ ಮಟ್ಟವನ್ನು ಭೂಮಿಯ ಮೇಲಿನ ಏರಿಳಿತಗಳನ್ನು, ಸಮುದ್ರದಾಳ ಕಂದರಗಳನ್ನು ಅಳೆಯಲು ಪ್ರಮಾಣಿತ ಶೂನ್ಯ ಬಿಂದುವಾಗಿ ಪರಿಗಣಿಸಲ್ಪಡುತ್ತದೆ.

ಭೂಮಿಯ ಮೇಲ್ಮೈ ಸಮತಟ್ಟಾಗಿಲ್ಲ, ಹಾಗೆಯೇ ಸಮುದ್ರದ ಮೇಲ್ಮೈ ಕೂಡಾ ಸಮತಟ್ಟಾಗಿಲ್ಲ.  ಸಮುದ್ರದ ಮೇಲ್ಮೈ ಜಗತ್ತಿನಾದ್ಯಂತದ ವಿವಿಧ ಸ್ಥಳಗಳಲ್ಲಿ  ಒಂದೇ ಸರಾಸರಿ ಅಳತೆಯಲ್ಲಿ ಏರಿಳಿತವಾಗಿರಲು ಸಾದ್ಯವಿಲ್ಲ.ಇದನ್ನ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ನಿರ್ಧಿಷ್ಟ ಪ್ರದೇಶದಲ್ಲಿನ ಸರಾಸರಿ ಸಮುದ್ರ ಮಟ್ಟ, ಜಾಗತಿಕ ಸರಾಸರಿ ಮಟ್ಟಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿರುತ್ತದೆ. ಇದಕ್ಕೆ ಆಯಾ ಪ್ರದೇಶದ ಹವಮಾಣ, ಮತ್ತು ಭೂಮಿಯ ಮೇಲಿನ ವಿವಿಧ ರೀತಿಯ ವೈಪರಿತ್ಯಗಳು ಕಾರಣವಾಗಿರುತ್ತವೆ.

ಜಾಗತಿಕ ಸರಾಸರಿ ಸಮುದ್ರ ಮಟ್ಟ:

ಇಡೀ ಜಗತ್ತಿನಾದ್ಯಂತ ಹರಡಿಕೊಂಡಿರುವ ವಿಶ್ವ ಮಹಾ ಸಾಗರದ ಮೇಲ್ಮೈ ನ ಸರಾಸರಿ ಎತ್ತರವನ್ನು ಜಾಗತಿಕ ಸರಾಸರಿ ಸಮುದ್ರ ಮಟ್ಟ ಎಂದು ಕರೆಯಲಾಗುತ್ತದೆ.ಜಾಗತಿಕ ತಾಪಮಾನದಲ್ಲಾಗುವ ಏರೀಳಿತಗಳು, ಹಿಮನದಿ, ಮಂಜುಗಡ್ಡೆಗಳ ಕರಗುವಿಕೆ, ನದಿ, ಜಲ ಪ್ರವಾಹಗಳ ಕೂಡುವಿಕೆ ಜಾಗತಿಕ ಸಮುದ್ರ ಮಟ್ಟವನ್ನು ಪ್ರಭಾವಿಸುವ ಅಂಶಗಳಾಗಿವೆ. ಈ ಜಾಗತಿಕ ಸಮುದ್ರ ಮಟ್ಟವನ್ನು ಬಾಹ್ಯಾಕಾಶದಲ್ಲಿರುವ  ಉಪಗ್ರಹಗಳ ರಾಡಾರ್ ಅಲ್ಟಿಮೀಟರ್ ಗಳನ್ನು ಬಳಸಿಕೊಂಡು ನಿರ್ಧರಿಸಲಾಗುತ್ತದೆ.

ಸ್ಥಳೀಯ ಸರಾಸರಿ ಸಮುದ್ರ ಮಟ್ಟ:

ಭೂಮಿಯ ಮೇಲಿನ ನಿರ್ಧಿಷ್ಟ ಪ್ರದೇಶವನ್ನು ಆಧಾರವಾಗಿರಿಸಿ, ಕರಾವಳಿ ಪ್ರದೇಶದಲ್ಲಿನ ಸಮುದ್ರದ ಮೇಲ್ಮೈನ್ನು ಅಳತೆ ಮಾಡುವ ವಿಧಾನವನ್ನು ಸ್ಥಳೀಯ ಸರಾಸರಿ ಸಮುದ್ರ ಮಟ್ಟ ಎಂದು ಕರೆಯಲಾಗುತ್ತದೆ.

ಪ್ರಾದೇಶಿಕ ವಾತಾವರಣ, ತಾಪಮಾನ, ಸಾಗರದ ಪರಿಚಲನೆ, ಭೂಮಿಯ ಮೇಲಾಗುವ ಪರಿಣಾಮಗಳು, ನದಿ, ಜಲ ಪ್ರವಾಹಗಳು ಸ್ಥಳೀಯ ಸರಾಸರಿ ಸಮುದ್ರ ಮಟ್ಟವನ್ನು ಪ್ರಭಾವಿಸುತ್ತವೆ.

ಕರಾವಳಿ ಪ್ರದೇಶಗಳ ಹತ್ತಿರ ಸ್ಥಾಪಿಸಿರುವ ಟೈಡಲ್ ಸ್ಟೇಷನ್ ಗಳು, ಉಪಗ್ರಹ ಆಧರಿತ ರಡಾರ್ ಅಲ್ಟಿಮೀಟರ್ ಗಳ ಮೂಲಕ ಸ್ಥಳೀಯ ಸರಾಸರಿ ಸಮುದ್ರ ಮಟ್ಟವನ್ನು ನಿರ್ಧರಿಸಲಾಗುತ್ತದೆ.

ಸರಾಸರಿ ಸಮುದ್ರ ಮಟ್ಟದ ಉಪಯೋಗಗಳು:

ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಒಂದಾದ ರೆಲ್ವೆ ನಿಲ್ದಾಣಗಳ ನಾಮಪಲಕಗಳಲ್ಲಿ ಸರಾಸರಿ ಸಮುದ್ರ ಮಟ್ಟವನ್ನು ನಮೂದಿಸಿರುತ್ತಾರೆ. ಇದರಿಂದ ಆ ರೆಲ್ವೆ ನಿಲ್ದಾಣ ಅಥವಾ ಪಟ್ಟಣ ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ! ಎಂಬುದನ್ನು ತಿಳಿಯಬಹುದು.

ಸರಾಸರಿ ಸಮುದ್ರ ಮಟ್ಟ ವನ್ನು ಆಧಾರವಾಗಿಟ್ಟುಕೊಂಡು ಭೂಮಿಯ ಎತ್ತರ, ವಾತಾವರಣದ ಎತ್ತರ, ಕಟ್ಟಡಗಳ, ಆಣೆಕಟ್ಟುಗಳ, ಸಾರ್ವಜನಿಕ ಅಥವಾ ಪ್ರಖ್ಯಾತ ಸ್ಥಳಗಳ ಎತ್ತರ, ನೀರಿನ ಎತ್ತರಗಳನ್ನು ಅಳೆಯಲು ಬಳಸುತ್ತಾರೆ.

ಭೂ ಸಮೀಕ್ಷೆ ಮತ್ತು ನಕ್ಷೆಶಾಸ್ತ್ರ ಗಳಲ್ಲಿ ಸರಾಸರಿ ಸಮುದ್ರಮಟ್ಟವನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ, ಮೂಲಸೌಕರ್ಯ ಯೋಜನೆಗಳಾದ, ರಸ್ತೆಗಳು, ಸೇತುವೆಗಳು, ಸುರಂಗಗಳು, ಅಣೆಕಟ್ಟುಗಳು ಮತ್ತು ಕಟ್ಟಡಗಳನ್ನು ಯೋಜಿಸುವಾಗ ಸ್ಥಿರತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಎಂಜಿನಿಯರ್‌ಗಳು ಸರಾಸರಿ ಸಮುದ್ರ ಮಟ್ಟವನ್ನು ಬಳಸುತ್ತಾರೆ.

 ಸರಾಸರಿ ಸಮುದ್ರ ಮಟ್ಟವನ್ನು ಭೂ ಗಡಿಗಳು, ಆಸ್ತಿ ರೇಖೆಗಳು ಮತ್ತು ರಾಷ್ಟ್ರೀಯ ಅಥವಾ ರಾಜ್ಯ ಗಡಿಗಳನ್ನು ಸ್ಥಾಪಿಸಲು ಬಳಸಲಾಗುತ್ತದೆ.

ವಾಯುಯಾನ ಮತ್ತು ಡ್ರೋಣ್ ಕಾರ್ಯಾಚರಣೆಗಳಲ್ಲಿ ಸರಾಸರಿ ಸಮುದ್ರಮಟ್ಟ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.  ವಿಮಾನ, ಡ್ರೋಣ್ ಗಳು ಎಷ್ಟು ಎತ್ತರದಲ್ಲಿ ಹಾರಾಡುತ್ತಿವೆ ಎಂಬುದನ್ನು ಅರಿಯಲು, ಯಾವ ಪ್ರದೇಶದಲ್ಲಿ ಹಾರಾಡುತ್ತಿವೆ ಎಂದು ತಿಳಿಸುವ ಏರೋ ನಾಟಿಕಲ್ ಚಾರ್ಟ್ ಗಳ ರಚನೆಯಲ್ಲಿ ಇದನ್ನು ಬಳಸಲಾಗುತ್ತದೆ.

ಹವಮಾನದ ಸಂಶೋದನೆಗಳಲ್ಲಿ, ಪ್ರವಾಹ, ಹಿಮನದಿಗಳ ಏರಿಳಿತಗಳನ್ನು ಅಭ್ಯಸಿಸಲು, ಜಾಗತಿಕ ತಾಪಮಾನ ಏರಿಕೆ ಮತ್ತು ಅದರ ಪರಿಣಾಮಗಳನ್ನು ಪತ್ತೆಹಚ್ಚಲು ಸರಾಸರಿ ಸಮುದ್ರ ಮಟ್ಟಒಂದು ಪ್ರಾಥಮಿಕ ಸೂಚಕವಾಗಿದೆ. ಪ್ರವಾಹ, ಚಂಡಮಾರುತದ ಉಲ್ಬಣಗಳ ಗಾತ್ರವನ್ನು ಲೆಕ್ಕಹಾಕಲು ಮತ್ತು ತಗ್ಗು ಪ್ರದೇಶಗಳಿಗೆ ಪ್ರವಾಹ ಅಪಾಯಗಳನ್ನು ಸೂಚಿಸಲು ಸರಾಸರಿ ಸಮುದ್ರ ಮಟ್ಟವನ್ನು ಬಳಸಲಾಗುತ್ತದೆ.

ಸಾಗರ ಶಾಸ್ತ್ರದ ಅಧ್ಯಯನದಲ್ಲಿ, ಸಾಗರದಾಳದ ರಚನೆಗಳ ಆಳ-ಎತ್ತರಗಳನ್ನು ತಿಳಿಸುವ ಹೈಡ್ರಗ್ರಾಫಿಕ್ ಚಾರ್ಟಗಳ ರಚನೆಯಲ್ಲಿ ಸರಾಸರಿ ಸಮುದ್ರ ಮಟ್ಟವನ್ನು ಬಳಸುತ್ತಾರೆ.

ಸುಮಾರು 18000 ವರ್ಷಗಳ ಹಿಂದಿನ ಹಿಮಯುಗದಲ್ಲಿ ಸಮುದ್ರ ಮಟ್ಟ ಈಗಿರುವ ಸಮುದ್ರ ಮಟ್ಟಕ್ಕಿಂತ 100 ಮೀಟರ್ (300 feet) ಆಳವಾಗಿತ್ತು ಎಂದು ಅಂದಾಜಿಸಲಾಗಿದೆ.

ಜಾಗತಿಕ ತಾಪಮಾನದ ಏರಿಕೆ, ವರ್ತಮಾನದಲ್ಲಿ ಭೂಮಿಯ ಪರಿಸರದಲ್ಲಾಗುತ್ತಿರುವ ಬದಲಾವಣೆಗಳಿಂದ ಹಿಮನದಿಗಳು ಮತ್ತು ಬೃಹತ್ತಾದ ಮಂಜುಗಡ್ಡೆಗಳು ಕರಗುತ್ತಿವೆ. ಸಮುದ್ರದಲ್ಲಿ ನೀರಿನ ಜಮಾವಣೆ ಹೆಚ್ಚುತ್ತಿದೆ. ಈ ಪ್ರಕ್ರಿಯೆಯನ್ನು ಸಮುದ್ರ ಮಟ್ಟ  ಏರಿಕೆಯೆಂದು ಕರೆಯಲಾಗುತ್ತದೆ.

ಸಮುದ್ರ ಮಟ್ಟ ಏರಿಕೆಯಿಂದ ಸಮುದ್ರ ದಡದಲ್ಲಿ ನೆಲೆನಿಂತಿರುವ ನ್ಯೂಯಾರ್ಕ್, ಮುಂಬಯಿನಂತಹ  ಬೃಹತ್ ನಗರಗಳು ಜಲಪ್ರಳಯದ ಭೀತಿಯನ್ನು ಎದುರಿಸುತ್ತಿವೆ. ಅಲ್ಲದೇ, ಸಮುದ್ರದ ಒಡಲಲ್ಲಿ ತೇಲುತ್ತಿರುವ ದ್ವೀಪ ರಾಷ್ಟ್ರಗಳು ಸಹ ಸುನಾಮಿ, ಜಲಪ್ರಳಯಗಳ ಬೀತಿಯಲ್ಲಿ ಕಾಲ ಕಳೆಯುತ್ತಿವೆ.

ಭೂಮಿಯ ಮೇಲಿನ ಏರಿಳಿತಗಳ ಬಗೆಗಿನ ಅಚ್ಚರಿಯ ಸಂಗತಿಗಳು:

ಇಸ್ರೇಲ್ ಮತ್ತು ಜೋರ್ಡಾನ್ ನಡುವಿನ ಗಡಿಯಲ್ಲಿ ಹರಡಿರುವ ಮೃತ ಸಮುದ್ರವು ಭೂಮಿಯ ಮೇಲ್ಮೈಯಲ್ಲಿ ಅತೀ ಆಳದ ಸ್ಥಳವಾಗಿದೆ. ಇದರ ಆಳವು ಸಮುದ್ರ ಮಟ್ಟಕ್ಕಿಂತ 400 ಮೀಟರ್ (1,312 ಅಡಿ) ಕೆಳಗೆ ಇದೆ.

ವಿಶ್ವ ಮಹಾಸಾಗರ ಪ್ರದೇಶದಲ್ಲಿ, ಪೆಸಿಫಿಕ್ ಮಹಾಸಾಗರದಲ್ಲಿರುವ ಚಾಲೆಂಜರ್ ಡೀಪ್ ಪ್ರದೇಶವು ಭೂಮಿಯ ಮೇಲಿನ ಅತ್ಯಂತ ಆಳದ ಸ್ಥಳವಾಗಿರುತ್ತದೆ. ಇದು ಸಮುದ್ರ ಮಟ್ಟಕ್ಕಿಂತ 11,034 ಮೀಟರ್ (36,200 ಅಡಿ) ಕೆಳಗೆ ಇದೆ.

ಹಿಮಾಲಯದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವು ಸಮುದ್ರ ಮಟ್ಟದಿಂದ 8,848 ಮೀಟರ್ (29,028 ಅಡಿ) ಎತ್ತರದಲ್ಲಿ ಭೂಮಿಯ ಮೇಲಿನ ಅತಿ ಎತ್ತರದ ಬಿಂದುವಾಗಿದೆ.

ವಿಶ್ವ ಮಹಾಸಾಗರ ಪ್ರದೇಶದಲ್ಲಿ ಅಮೆರಿಕದ ಹವಾಯಿ ರಾಜ್ಯದಲ್ಲಿರುವ ಮೌನಾ ಕಿಯಾ ಜ್ವಾಲಾಮುಖಿಯ ಶಿಖರವು ಎವರೆಸ್ಟ್ ಗಿಂತ ಹೆಚ್ಚು ಎತ್ತರವಾಗಿದೆ. ಮೌನಾ ಕೀ ಸಮುದ್ರದ ತಳದಿಂದ ಅಳೆಯುವಾಗ 10,203 ಮೀಟರ್ (33,476 ಅಡಿ) ಎತ್ತರವಿದೆ, ಆದರೆ ಸಮುದ್ರ ಮಟ್ಟದಿಂದ ಕೇವಲ 4,207 ಮೀಟರ್ (13,803 ಅಡಿ) ಎತ್ತರದಲ್ಲಿದೆ.

Leave a Comment

Your email address will not be published. Required fields are marked *

error: Content is protected !!